Saturday, August 15, 2015

ಈಸೂರು

ಈಸೂ​ರು 1942ರಲ್ಲೇ ಸ್ವಾತಂತ್ರ್ಯ ಘೋಷಿಸಿಕೊಂಡ ಗ್ರಾಮ ಇದು;ಈಸೂರಿಗೊಂದು ಸಲಾಂ.

ಹೌದು ಕರ್ನಾಟಕ ಮಾತ್ರವಲ್ಲ, ದೇಶಕ್ಕೆ ಹೆಮ್ಮೆ ತರುವ ವಿಷಯ. ಯಾಕೆಂದರೆ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ಕಿಚ್ಚು ಹಚ್ಚಿದ ಊರು ಶಿಕಾರಿಪುರ ತಾಲೂಕಿನ ಈಸೂರು ಎಂಬ ಪುಟ್ಟ ಗ್ರಾಮ. 1942ರಲ್ಲೇ ಸ್ವಾತಂತ್ರ್ಯ ಘೋಷಿಸಿಕೊಳ್ಳುವ ಮೂಲಕ ಇಡೀ ರಾಷ್ಟ್ರದ ಗಮನಸೆಳೆದ ಕೀರ್ತಿ ಈಸೂರು ಗ್ರಾಮದ್ದು. ಏಸೂರು ಕೊಟ್ಟರೂ ಈಸೂರು ಕೊಡೆವು ಎಂಬ ವ್ಯಾಖ್ಯೆ ಸ್ವಾತಂತ್ರ್ಯ ಚಳವಳಿ ಸಂದರ್ಭ ಮನೆಮಾತಾಗಿತ್ತು.

ಇಂದು ಆಗಸ್ಟ್ 15 69ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿದ್ದೇವೆ. ಮಹಾತ್ಮ ಗಾಂಧೀಜಿ, ಸುಭಾಶ್ಚಂದ್ರ ಬೋಸ್ ರಂತಹ ಮಹಾನ್ ಸ್ವಾತಂತ್ರ್ಯ ಹೋರಾಟಗಾರರ ಘೋಷಣೆಯಿಂದ ಸ್ಫೂರ್ತಿ ಪಡೆದ ಊರು ಈಸೂರು. ಗಾಂಧೀಜಿಯವರ ಕ್ವಿಟ್ ಇಂಡಿಯಾ ಚಳವಳಿ ಘೋಷಣೆಯಿಂದ ಸ್ಫೂರ್ತಿಗೊಂಡ ಈಸೂರು ಜನರು 1942 ಸೆಪ್ಟೆಂಬರ್ 27ರಂದು ಈಸೂರಿನ ವೀರಭದ್ರೇಶ್ವರ ದೇವಸ್ಥಾನದ ಮೇಲೆ ಬಾವುಟ ಹಾರಿಸಿದ್ದರು.

ಇದು ಸಾಮಾನ್ಯ ಸಂಗತಿ ಆಗಿರಲಿಲ್ಲ. ಈ ಘಟನೆಯಿಂದಾಗಿ ಈಸೂರು ಇತಿಹಾಸದಲ್ಲೇ ದೊಡ್ಡ ಹೆಸರು ಪಡೆಯಿತು. ಸ್ವಾತಂತ್ರ್ಯ ಘೋಷಿಸಿಕೊಂಡ ಪ್ರಪ್ರಥಮ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.  ತಮ್ಮದೇ ಆಡಳಿತ ವ್ಯವಸ್ಥೆಯನ್ನು ಅಳವಡಿಸಿಕೊಂಡು ಸ್ವಾತಂತ್ರ್ಯ ಘೋಷಿಸಿಕೊಂಡ ಭಾರತದ ಮೊದಲ ಗ್ರಾಮ ಈಸೂರು. ಈ ಪುಟ್ಟ ಗ್ರಾಮದ ಜನರ ಸ್ವಾಭಿಮಾನ ಬ್ರಿಟಿಷರನ್ನು ತಲ್ಲಣಗೊಳಿಸಿತ್ತು. ಕೊನೆಗೆ ಇಡೀ ಗ್ರಾಮ ಬ್ರಿಟಿಷರ ಕೋಪದ ಅಗ್ನಿಗೆ ಆಹುತಿಯಾಯಿತು. ನೂರಾರು ಹೋರಾಟಗಾರರು ಭೂಗತರಾದರು. ಹಲವು ಮಹಿಳೆಯರು ಅತ್ಯಾಚಾರಕ್ಕೊಳಗಾದರು. ಐವರನ್ನು ನೇಣಿಗೇರಿಸಲಾಯಿತು. ಈ ದುರಂತ, ಮಹಾತ್ಮಾ ಗಾಂಧಿ, ಸುಭಾಷ್‌ಚಂದ್ರ ಬೋಸ್‌ ಅವರಂತಹ ನಾಯಕರ ಗಮನಸೆಳೆದಿತ್ತು.

ಈಸೂರು ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ನಡೆದ ಪ್ರಕರಣದಲ್ಲಿ ಹಲವಾರು ಮಂದಿಯನ್ನು ಬ್ರಿಟಿಷರು ಬಂಧಿಸುತ್ತಾರೆ. ಅದರಲ್ಲಿ ಕೆಲವರನ್ನು ಬಿಡುಗಡೆ ಮಾಡಿ, ಉಳಿದವರಿಗೆ ಜೀವಾವಧಿ ಶಿಕ್ಷೆ ವಿಧಿಸುತ್ತಾರೆ. ಅದರಲ್ಲಿ ಸ್ವಾತಂತ್ರ್ಯ ವೀರರಾದ ಕೆ.ಗುರುಪ್ಪ, ಮಲ್ಲಪ್ಪ, ಹಾಲಪ್ಪ, ಸೂರ್ಯನಾರಾಯಣಾಚಾರ್ ಅವರನ್ನು 1943ರಲ್ಲಿ ನೇಣಿಗೇರಿಸಿದ್ದರು.

No comments:

Post a Comment